ಅನಾದಿಕಾಲದಿಂದಲೂ ಭಾರತ ದೇಶದ ಮೂಲ ನಿವಾಸಿಗಳಿಗೆ ಅವರ ಖುಷಿ, ಮುನಿಗಳಿಂದ ಕೊಡಲ್ಪಟ್ಟಿರುವ ಜೀವನ ವಿಧಾನವನ್ನು ಸನಾತನ ಧರ್ಮವೆ೦ದು ಕರೆಯಲ್ಪಟ್ಟಿದೆ. ಸನಾತನ ಎಂದರೆ ಶಾಶ್ವತ ಅಥವಾ ನಿರಂತರ ಮತ್ತು ಧರ್ಮ ಎಂದರೆ ಜೀವನ ವಿಧಾನ. ಇದರಿಂದ ಸನಾತನಧರ್ಮ ಎಂದರೆ ಒಂದು ಶಾಶ್ವತ ರೀತಿಯ ಜೀವನ ವಿಧಾನ ಮತ್ತು ಸಂಸ್ಕೃತಿ. ಇದನ್ನೇ ವಾಯುವ್ಯದಿಂದ ದಂಡೆತ್ತಿ ಬಂದ ಶಕ್ತಿಗಳು ಸಿಂಧೂನದಿಯಿಂದ ಈಚೆಗಿರುವ ಸಂಸ್ಕೃತಿಯನ್ನು ಹಿಂದೂ ಎಂದು ಕರೆಯುತ್ತಾ, ಅದೇ ವಾಡಿಕೆಯಾಗಿ ಬಂದು ಬಿಟ್ಟಿತು. ನಿಜಕ್ಕೂ ಹಿಂದೂಧರ್ಮ ಎಂಬ ಹೆಸರು ಯಾವುದೇ ನಮ್ಮ ಪುರಾಣ, ಇತಿಹಾಸಗಳಲ್ಲಿ ಕಂಡುಬರುವುದಿಲ್ಲ. ಇದು ಇತ್ತೀಚೆಗೆ ಚಾರಿತ್ರಿಕವಾಗಿ ಸನಾತನಧರ್ಮಕ್ಕೆ ಕೊಡಲ್ಪಟ್ಟಿರುವ ಒಂದು ಹೆಸರು ಅಷ್ಟೇ.
ಸನಾತನ ಧರ್ಮವು ಅನಾದಿಕಾಲದಿಂದಲೂ ಭಾರತೀಯ ಜೀವನದ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ಈ ಜೀವನ ವಿಧಾನವನ್ನು ಇತ್ತೀಚಿನ ಧರ್ಮಗಳಂತೆ ಯಾವುದೇ ಒಂದು ವ್ಯಕ್ತಿಯಿಂದ ಅಥವಾ ಪ್ರವಾದಿಯಿಂದ ಪ್ರತಿಪಾದಿಸಿದುದಲ್ಲ. ಇತ್ತೀಚಿನ ಚಾರಿತ್ರಿಕ ಧರ್ಮಗಳನ್ನು ಒಬ್ಬ ಪ್ರವಾದಿಯು ತನ್ನ ಅನುಯಾಯಿಗಳಿಗೆ ನಿರ್ದಿಷ್ಟ ರೀತಿಯಲ್ಲಿ ಜೀವನ ವಿಧಾನದ ಆದೇಶವನ್ನು ಕೊಟ್ಟಿರುತ್ತಾನೆ ಮತ್ತು ಅದಕ್ಕೆ ತಪ್ಪಿದಲ್ಲಿ ಶಿಕ್ಷೆಗಳನ್ನು ವಿಧಿಸಿರುತ್ತಾನೆ.
ಆದರೆ ಸನಾತನ ಧರ್ಮವು ಯಾವುದೇ ಒಬ್ಬ ವ್ಯಕ್ತಿಯಿಂದ ಅಥವಾ ಪ್ರವಾದಿಯಿಂದ ಪ್ರತಿಪಾದಿಸಿದುದಲ್ಲ. ಇದು ಕೇವಲ ನಮ್ಮ ಅನಂತ ಸಂತ, ಋಷಿ, ಮುನಿಗಳ ದೈವಿಕ ಚಿಂತನೆಯ ಪರಂಪರೆಯಾಗಿರುತ್ತದೆ. ಆದ್ದರಿಂದ ಸನಾತನಧರ್ಮದಲ್ಲಿ ಆಧ್ಯಾತ್ಮಿಕ ಸ್ವಾತಂತ್ರ್ಯವು ಬಹಳವಾಗಿರುತ್ತದೆ ಮತ್ತು ಅದು ಕೇವಲ ವ್ಯಕ್ತಿಯ ಇಷ್ಟಕ್ಕೆ ಒಳಪಟ್ಟಿದ್ದಾಗಿರುತ್ತದೆ.
ಸನಾತನಧರ್ಮವು ನಾಲ್ಕು ತತ್ವಗಳ ಆಧಾರದ ಮೇಲೆ ಪ್ರತಿಪಾದಿಸಲ್ಪಟ್ಟಿದೆ. ಅದೇನೆಂದರೆ ಧರ್ಮ, ಕರ್ಮ, ಪುನರ್ಜನ್ಮ ಮತ್ತು ಮೋಕ್ಷ - ಧರ್ಮ ಎಂದರೆ ಮಾನವನು ಎಲ್ಲಾ ರೀತಿಯಲ್ಲೂ ಪ್ರಕೃತಿಗೆ ಅನುಗುಣವಾಗಿ ಸನ್ಮಾರ್ಗದಲ್ಲಿ ಜೀವನವನ್ನು ನಡೆಸುವುದು. ಅದೇನೆಂದರೆ ಪ್ರೇಮ, ದಯೆ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಹಿಂಸೆ ಮಾಡದಿರುವುದು (ಆತ್ಮರಕ್ಷಣೆಯ ಮತ್ತು ಸಂದರ್ಭದಲ್ಲಿ ಬಿಟ್ಟು), ಮೋಸ ಮಾಡದಿರುವುದು, ಸುಳ್ಳು ಹೇಳದಿರುವುದು, ಒಪ್ಪಿಕೊಂಡ ಮತ್ತು ಕೊಡಲ್ಪಟ್ಟಿರುವ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡುವುದು, ದಾನ ಧರ್ಮಗಳನ್ನು ಅವಲಂಭಿಸುವುದು, ಆಧ್ಯಾತ್ಮಿಕ ಚಿಂತನೆಗಳಾದ ಭಕ್ತಿ, ಧ್ಯಾನ ಮುಂತಾದ ಸಾಧನೆಗಳನ್ನು ಅವಲಂಭಿಸುವುದು. ಈ ರೀತಿ ಸಾತ್ವಿಕವಾಗಿ ಜೀವನ ನಡೆಸುವುದೇ ಧರ್ಮಬದ್ಧವಾದ ಜೀವನ. ಧರ್ಮಬದ್ಧವಾಗಿ ಜೀವನ ನಡೆಸಿದರೆ ಕರ್ಮ ಉಂಟಾಗುವುದಿಲ್ಲ.
ಕರ್ಮ ಎಂದರೆ ಮಾನವನು ಮಾಡುವ ಒಳ್ಳೆಯ ಮತ್ತು ಕೆಟ್ಟ ಕ್ರಿಯೆಗಳ ಪ್ರತಿಫಲ ಕರ್ಮ ಬಂಧನದಲ್ಲಿ ಸಿಲುಕದಿದ್ದರೆ ಪುನರ್ಜನ್ಮ ಉಂಟಾಗುವುದಿಲ್ಲ, ಏಕೆಂದರೆ ಕರ್ಮವೇ ಪುನರ್ಜನ್ಮಕ್ಕೆ ನಾಂದಿ. ಕರ್ಮಬಂಧನದಲ್ಲಿ ಸಿಲುಕಿಕೊಂಡ ವ್ಯಕ್ತಿ ಪುನರ್ಜನ್ಮಗಳಿಗೆ ಒಳಗಾಗಿ ಜನ್ಮಜನ್ಮಾಂತರಗಳಲ್ಲಿ ಕರ್ಮದ ಪ್ರತಿಫಲಗಳನ್ನು ಅನುಭವಿಸುವನು. ಧರ್ಮಮಾರ್ಗದಲ್ಲಿ ಸಾಗುವವನಿಗೆ ಕರ್ಮ ಉಂಟಾಗುವುದಿಲ್ಲ, ಕರ್ಮವಿಲ್ಲದಿದ್ದಲ್ಲಿ ಆತ್ಮ ಸ್ವರೂಪಿಯಾದ ವ್ಯಕ್ತಿ ಚೈತನ್ಯವು, ವಿಶ್ವಚೈತನ್ಯವಾದ ಪರಮಾತ್ಮನಲ್ಲಿ ಲಯವಾಗುವುದು. ಇದೇ ಮೋಕ್ಷ. ಹೇಗೆ ಉಗಮವಾದ ನದಿಯು ಸತತವಾಗಿ ಹರಿಯುತ್ತಾ ಕೊನೆಗೆ ಸಮುದ್ರವನ್ನು ಸೇರಿ ತನ್ನನ್ನು ತಾನು ಸಮುದ್ರದಲ್ಲಿ ಲಯ ಮಾಡಿಕೊಂಡು ಇನ್ನಿಲ್ಲವಾಗಿ ಸ್ಥಿರತ್ವವನ್ನು ಪಡೆಯುವುದೋ ಹಾಗೇ. ಇದೇ ಸನಾತನ ಧರ್ಮದ ನಾಲ್ಕು ಸ್ಥಂಭಗಳಾದ ಧರ್ಮ, ಕರ್ಮ, ಪುನರ್ಜನ್ಮ ಮತ್ತು ಮೋಕ್ಷ.


.jpeg)

No comments:
Post a Comment